ಸೂಕ್ಷ್ಮದರ್ಶಕ
	ಅತಿ ಸಣ್ಣ ವಸ್ತುಗಳ ಅಥವಾ ವಸ್ತುಗಳ ಅತಿ ಸೂಕ್ಷ್ಮ ವಿವರಗಳ ವರ್ಧಿತ ಬಿಂಬ ಉತ್ಪಾದಿಸಬಲ್ಲ ಸಾಧನ (ಮೈಕ್ರಸ್ಕೋಪ್). ದ್ಯುತಿ, ಧ್ವನಿ ಅಥವಾ ಎಲೆಕ್ಟ್ರಾನಿಕ್ ವಿಧಾನಗಳಿಂದ ಬಿಂಬೋತ್ಪತ್ತಿ. ನೇರವಾಗಿ ಅಥವಾ ಎಲೆಕ್ಟ್ರಾನಿಕ್ ಸಂಸ್ಕರಣೆಗೊಳಪಡಿಸಿ ಅಥವಾ ಎರಡರ ಯುಕ್ತ ಸಂಯೋಜನೆಯಿಂದ ಉತ್ಪಾದಿತ ಬಿಂಬದ ವೀಕ್ಷಣೆ. ನೇರವಾಗಿ ವಸ್ತುವಿನ ಬಿಂಬೋತ್ಪಾದನೆ ಆಗಬಹುದು; ವಸ್ತುವಿನ ಕ್ರಮವೀಕ್ಷಣೆಯಿಂದ (ಸ್ಕ್ಯಾನ್) ಬಿಂಬ ನಿರ್ಮಾಣವೂ ಆಗಬಹುದು. ವಸ್ತುವಿನ ಎಷ್ಟು ಪಟ್ಟು ವರ್ಧಿತ ಬಿಂಬವನ್ನು ಸೂಕ್ಷ್ಮದರ್ಶಕ ಉತ್ಪಾದಿಸಬಲ್ಲದು ಎಂಬುದನ್ನು ಸೂಚಿಸುವ ಸಂಖ್ಯೆ ಅದರ ವರ್ಧನ ಸಾಮಥ್ರ್ಯ (ಮ್ಯಾಗ್ನಿಫೈಯಿಂಗ್ ಪವರ್). ಇದೊಂದು ಏಕಮಾನವಿಲ್ಲದ ನಿಷ್ಪತ್ತಿ. ವೀಕ್ಷಿಸಬಹುದಾದ ಸೂಕ್ಷ್ಮವಿವರದ ಗಾತ್ರದ ಅಳತೆಯೇ ಅದರ ಪೃಥಕ್ಕರಣ ಸಾಮಥ್ರ್ಯ (ರಿಸಾಲ್ವಿಂಗ್ ಪವರ್). ರೇಖೀಯ ಏಕಮಾನದಲ್ಲಿ (ಸಾಮಾನ್ಯವಾಗಿ ಮಿಮೀ ಗಳಲ್ಲಿ) ಇದನ್ನು ಸೂಚಿಸುವದು ವಾಡಿಕೆ.

	ದೃಗ್ಸೂಕ್ಷ್ಮದರ್ಶಕಗಳು (ಆಪ್ಟಿಕಲ್ ಮೈಕ್ರಸ್ಕೋಪ್ಸ್): ವಸ್ತುವಿನ ವರ್ಧಿತ ಬಿಂಬೋತ್ಪಾದನೆಗೆ ದೃಶ್ಯ ಬೆಳಕನ್ನು ಉಪಯೋಗಿಸುವ ಸೂಕ್ಷ್ಮದರ್ಶಕಗಳು. ಇವುಗಳ ಬಳಕೆ ವ್ಯಾಪಕ. ಅಲ್ಪ ನಾಭಿಯುದ್ದದ ದ್ವಿಪೀನ ಮಸೂರವೇ ಸರಳ ಸೂಕ್ಷ್ಮದರ್ಶಕ. 1-10 ವ್ಯಾಪ್ತಿಯ ವರ್ಧನ ಸಾಮಥ್ರ್ಯವುಳ್ಳ ಇವುಗಳಿಂದ ಸು. 0.01ಮಿಮೀ ವರೆಗಿನ ಪೃಥಕ್ಕರಣ ಸಾಧ್ಯ. ಆದರೂ ಒಂದಕ್ಕಿಂತ ಹೆಚ್ಚು ದೃಕ್‍ಘಟಕಗಳುಳ್ಳ ಸಂಯುಕ್ತ ಸೂಕ್ಷ್ಮದರ್ಶಕಗಳ ಬಳಕೆ ಸಾರ್ವತ್ರಿಕ. 2.5-1000 ವ್ಯಾಪ್ತಿಯ ವರ್ಧನ ಸಾಮಥ್ರ್ಯವುಳ್ಳ ಇವು 0.01-0.0002 ಮಿಮೀ ಪೃಥಕ್ಕರಣ ಒದಗಿಸಬಲ್ಲವು.

	ವಸ್ತುಕ (ಆಬ್‍ಜೆಕ್ಟಿವ್) ಮತ್ತು ನೇತ್ರಕ (ಐ ಪೀಸ್) ಎಂಬ ಎರಡು ಮಸೂರ ವ್ಯವಸ್ಥೆಗಳು ವಿರುದ್ಧ ತುದಿಗಳಲ್ಲಿರುವ ಕೊಳವೆ ಸಂಯಕ್ತ ಸೂಕ್ಷ್ಮದರ್ಶಕದ ಪ್ರಧಾನ ಘಟಕ. ಕನಿಷ್ಠ ಎರಡು ಮಸೂರಗಳ ಸಂಯೋಜಿತ ಘಟಕ ವಸ್ತುಕ. ವೀಕ್ಷಿತ ವಸ್ತುವಿನ ವರ್ಧಿತ ನಿಜ ಬಿಂಬೋತ್ಪಾದನೆ ಇದರ ಕಾರ್ಯ. ನಿಜ ಬಿಂಬದ ವರ್ಧಿತ ಮಿಥ್ಯ ಬಿಂಬೋತ್ಪಾದನೆ ನೇತ್ರಕದ ಕಾರ್ಯ. ಒಂದು ನೇತ್ರಕವುಳ್ಳದ್ದು ಏಕನೇತ್ರೀಯ (ಮಾನಾಕ್ಯುಲರ್), ಎರಡು ಉಳ್ಳದ್ದು ದ್ವಿನೇತ್ರೀಯ (ಬೈನಾಕ್ಯುಲರ್) ಸೂಕ್ಷ್ಮದರ್ಶಕ. ಎರಡೂ ಮಸೂರ ವ್ಯವಸ್ಥೆಗಳ ನಾಭಿಯುದ್ದಗಳು ಸೂಕ್ಷ್ಮದರ್ಶಕದ ವರ್ಧನ ಸಾಮಥ್ರ್ಯದ ನಿರ್ಧಾರಕಗಳು. ವೀಕ್ಷಿಸಬೇಕಾದ ವಸ್ತುವನ್ನು ಸ್ಥಿರವಾಗಿ ಹಿಡಿದಿಡಬಲ್ಲ ವೇದಿಕೆ, ಮಸೂರ ವ್ಯವಸ್ಥೆಗಳುಳ್ಳ ಕೊಳವೆಯನ್ನು ಹಿಂದಕ್ಕೂ ಮುಂದಕ್ಕೂ ಚಲಿಸುವ ವ್ಯವಸ್ಥೆಯೂ ಉಂಟು. ಗಾಜಿನ ತೆಳು ಫಲಕದ ಮೇಲೆ ನಮೂನೆಯನ್ನಿಟ್ಟು ಅದರ ಮೂಲಕ ಬೆಳಕನ್ನು ಹಾಯಿಸಿ ವೀಕ್ಷಿಸುವದು ಸಾಮಾನ್ಯ. ಇದಕ್ಕಾಗಿ, ನಮೂನೆಯತ್ತ ಬೆಳಕನ್ನು ಬೀರಬಲ್ಲ ವ್ಯವಸ್ಥೆಯೂ ಉಂಟು. ವರ್ಧಿತ ಬಿಂಬದ ಛಾಯಾಚಿತ್ರ ಪಡೆಯಲು ನೆರವಾಗುವ ಕ್ಯಾಮೆರವನ್ನು ನೇತ್ರಕದೊಂದಿಗೆ ಸಂಯೋಜಿಸಿರುವ ಸೂಕ್ಷ್ಮದರ್ಶಕಗಳಿವೆ. ಸಂಶೋಧಕರು ಬಳಸುವ ಸೂಕ್ಷ್ಮದರ್ಶಕಗಳಲ್ಲಿ ಮೈಕ್ರೊಮೀಟರ್ ತಿರುಪುಗಳ ನೆರವಿನಿಂದ ವೇದಿಕೆಯನ್ನು ಚಲಿಸುವ ಮತ್ತು ಆವರ್ತಿಸುವ ವ್ಯವಸ್ಥೆಯೊಂದಿಗೆ ಮೂರು ಅಥವಾ ಹೆಚ್ಚು ವಸ್ತುಕಗಳಿರುತ್ತವೆ. 

	ವಿಶೇಷೋದ್ದೇಶ ದೃಗ್ಸೂಕ್ಷ್ಮದರ್ಶಕಗಳು: ವಿಶಿಷ್ಟ ಲಕ್ಷಣಗಳಿರುವ ಸೂಕ್ಷ್ಮದರ್ಶಕಗಳು. ಉದಾ: 1. ಘನರೂಪದರ್ಶೀ (ಸ್ಟೀರಿಯೊಸ್ಕೋಪಿಕ್) ಸೂಕ್ಷ್ಮದರ್ಶಕ: ಮೂರು ಆಯಾಮಗಳುಳ್ಳ ಬಿಂಬೋತ್ಪಾದನೆಗಾಗಿ ಏಕಕಾಲದಲ್ಲಿ ಒಂದು ನಮೂನೆಯನ್ನು ನಾಭಿಸ್ಥಗೊಳಿಸಬಲ್ಲ ಎರಡು ಅಲ್ಪ ಸಾಮಥ್ರ್ಯದ ಸೂಕ್ಷ್ಮದರ್ಶಕಗಳ ಸಂಯೋಜನೆ. 2. ಅತಿನೇರಳೆ ಸೂಕ್ಷ್ಮದರ್ಶಕ: ರೋಹಿತದ ಅತಿನೇರಳೆ ಭಾಗದ ಅಲೆಯುದ್ದಗಳನ್ನು ಉಪಯೋಗಿಸುತ್ತದೆ. ಬೆಣಚು, ಫ್ಲೂರೈಟ್ ಅಥವಾ ಅಲ್ಯೂಮಿನೀಕೃತ ದರ್ಪಣದ ದೃಕ್‍ಘಟಕಗಳಿರುತ್ತವೆ. ಸ್ಫುರದೀಪ್ತಿ ಛಾಯಾಚಿತ್ರೀಕರಣ ಅಥವಾ ಎಲೆಕ್ಟ್ರಾನಿಕ್ ಕ್ರಮವೀಕ್ಷಣೆಯ ನೆರವಿನಿಂದ ದೃಶ್ಯ ಬಿಂಬೋತ್ಪಾದನೆ. ವೈದ್ಯವಿಜ್ಞಾನ ಸಂಶೋಧನೆಗಳಲ್ಲಿ ಬಳಕೆ. 3. ಶಿಲಾವರ್ಣನ (ಪೆಟ್ರೊಗ್ರ್ಯಾಫಿಕ್) ಸೂಕ್ಷ್ಮದರ್ಶಕ: ಅಗ್ನಿ ಮತ್ತು ರೂಪಾಂತರಿತಶಿಲೆಗಳಲ್ಲಿ ಖನಿಜ ಘಟಕಗಳನ್ನು ಗುರುತಿಸಲು ಮತ್ತು ಅವುಗಳ ಪ್ರಮಾಣ ಅಂದಾಜಿಸಲು ಬಳಕೆ. ನಿಕಲ್ ಅಶ್ರಗ ಅಥವಾ ಇತರ ಯಾವುದಾದರೂ ಸಾಧನದಿಂದ ಧ್ರುವೀಕರಿಸಿದ ಬೆಳಕಿನಲ್ಲಿ ನಮೂನೆಯ ಪರೀಕ್ಷೆ. ಇನ್ನೊಂದು ನಿಕಲ್ ಅಶ್ರಗ ಅಥವಾ ವಿಶ್ಲೇಷಕದ ನೆರವಿನಿಂದ ನಮೂನೆಯಿಂದಾದ ಧ್ರುವೀಕರಣದ ಮತ್ತು ಆವರ್ತಿಸುವ ವೇದಿಕೆಯ ನೆರವಿನಿಂದ ಧ್ರುವೀಕರಣ ಬದಲಾವಣೆಯ ನಿರ್ಧಾರ. 4. ಕಪ್ಪುಕ್ಷೇತ್ರ (ಡಾರ್ಕ್ ಫೀಲ್ಡ್) ಸೂಕ್ಷ್ಮದರ್ಶಕ: ನಮೂನೆಯ ಮೇಲೆ ಕೇಂದ್ರೀಕೃತವಾಗುವ ಅತಿ ತೀವ್ರ ಬೆಳಕಿನ ಟೊಳ್ಳು ಶಂಕುವಿನಿಂದ ದೀಪನ ವ್ಯವಸ್ಥೆ. ವಸ್ತುಕದ ದೃಶ್ಯಕ್ಷೇತ್ರವು ಶಂಕುವಿನ ಕಪ್ಪು ಟೊಳ್ಳು ಭಾಗದಲ್ಲಿದ್ದು ವಸ್ತು ಚದುರಿಸಿದ ಬೆಳಕನ್ನು ಮಾತ್ರ ಗ್ರಹಿಸುತ್ತದೆ. ತತ್ಪರಿಣಾಮವಾಗಿ, ವೀಕ್ಷಿತ ಅತಿಸೂಕ್ಷ್ಮ ಭಾಗಗಳು ಕಪ್ಪು ಹಿನ್ನೆಲೆಯಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತವೆ. ಪ್ರಸಾಮಾನ್ಯ ದೀಪನದಲ್ಲಿ ವೀಕ್ಷಿಸಲಾಗದಷ್ಟು ಪುಟ್ಟ ವಸ್ತುಗಳ ಮತ್ತು ಅನಭಿರಂಜಿತ (ಅನ್‍ಸ್ಟೇಯ್ನ್‍ಡ್) ಪಾರಕ ಜೈವಿಕ ವಸ್ತುಗಳ ವೀಕ್ಷಣೆಗೆ ಈ ಸೂಕ್ಷ್ಮದರ್ಶಕ ಉಪಯುಕ್ತ. 5. ಪ್ರಾವಸ್ಥೆ (¥sóÉೀಸ್) ಸೂಕ್ಷ್ಮದರ್ಶಕ: ಇದರ ದೀಪನ ವ್ಯವಸ್ಥೆಯೂ ಬೆಳಕಿನ ಟೊಳ್ಳು ಶಂಕುವೇ ಆಗಿದೆ. ಬೆಳಕಿನ ಶಂಕು ಕಿರಿದಾಗಿದ್ದು ವಸ್ತುಕದ ದೃಶ್ಯಕ್ಷೇತ್ರವನ್ನು ಪ್ರವೇಶಿಸುವುದು ಇದರ ಒಂದು ವಿಶಿಷ್ಟತೆ. ಬೆಳಕಿನ ತೀವ್ರತೆಯನ್ನು ಕಡಿಮೆ ಮಾಡಿ ಅಲೆಯುದ್ದದ ¼ ಭಾಗದಷ್ಟು ಪ್ರಾವಸ್ಥೆ ಪಲ್ಲಟನ (ಶಿಫ್ಟ್) ಉಂಟುಮಾಡುವ ರಿಂಗಿನಾಕೃತಿಯ ಸಾಧನವೊಂದು ವಸ್ತುಕದಲ್ಲಿ ಇರುವದು ಇನ್ನೊಂದು ವಿಶಿಷ್ಟತೆ. ಇಂಥ ದೀಪನ ವ್ಯವಸ್ಥೆ ಪಾರಕ ವಸ್ತುವಿನ ವಕ್ರೀಭವನಾಂಕವನ್ನು ಅತ್ಯಲ್ಪ ಪ್ರಮಾಣದಲ್ಲಿ ಬದಲಿಸಿ ತನ್ಮೂಲಕ ಅದು ದೃಗ್ಗೋಚರವಾಗುವಂತೆ ಮಾಡುತ್ತದೆ. ಜೀವಂತ ಊತಕಗಳ ವೀಕ್ಷಣೆಗೆ ಇದು ಉಪಯುಕ್ತ. 6. ಸಮೀಪ ಕ್ಷೇತ್ರ (ನಿಯರ್ ಫೀಲ್ಡ್) ಸೂಕ್ಷ್ಮದರ್ಶಕ: ದೀಪಿಸುವ ಬೆಳಕಿನ ಅಲೆಯುದ್ದಕ್ಕಿಂತ ಕೊಂಚ ಚಿಕ್ಕದಾದ ವಿವರಗಳನ್ನು ವೀಕ್ಷಿಸಲು ಉಪಯುಕ್ತ.

	ಸಂನಾಭೀ (ಕನ್‍ಫೋಕಲ್) ಸೂಕ್ಷ್ಮದರ್ಶಕ: ಲೇಸರ್ ಬೆಳಕಿನ ಉಪಯೋಗ ಇದರ ವಿಶಿಷ್ಟತೆ. ಕ್ರಮಲೋಕಿಸುವ ದರ್ಪಣಗಳನ್ನು ಉಪಯೋಗಿಸಿ ಲೇಸರ್ ಬೆಳಕಿನಿಂದ ನಮೂನೆಯನ್ನು ಅಡ್ಡಡ್ಡಲಾಗಿ ಕ್ರಮಲೋಕಿಸಿ ಅಂಕಾತ್ಮಕ (ಡಿಜಿಟಲ್) ಗಣಕದ ಪರದೆಯ ಮೇಲೆ ಬಿಂಬ ಮೂಡಿಸುತ್ತದೆ. ಪ್ರತಿಫಲನ ಅಥವಾ ಪ್ರತಿದೀಪ್ತಿಯಿಂದ ದಪ್ಪನೆಯ ನಮೂನೆಗಳನ್ನು ಸಪಾಟಾದ ತೆಳು ದೃಕ್‍ಹಲ್ಲೆಗಳಾಗಿ ಛೇದಿಸಬಲ್ಲದು. ದೃಷ್ಟಿರೇಖೆಗೆ ಸಮಾಂತರದಲ್ಲಿರುವ, ಸಮತಲದಲ್ಲಿರುವ ನಮೂನೆಹಲ್ಲೆಗಳನ್ನೂ ವೀಕ್ಷಿಸಬಲ್ಲದು. ಅತ್ಯುಚ್ಚ ಪೃಥಕ್ಕರಣವುಳ್ಳ 3 ಆಯಾಮಗಳ ಬಿಂಬ ಸೃಷ್ಟಿಸುತ್ತದೆ.  

	ಎಲೆಕ್ಟ್ರಾನ್ ಸೂಕ್ಷ್ಮದರ್ಶಕ: ದೃಶ್ಯ ಬೆಳಕಿನ ಅಲೆಯುದ್ದದಿಂದಾಗಿ ದೃಗ್ಸೂಕ್ಷ್ಮದರ್ಶಕದ ವರ್ಧನ ಸಾಮಥ್ರ್ಯಕ್ಕೆ ಮೇಲ್ಮಿತಿ ಉಂಟು. ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳು ವಸ್ತುವನ್ನು ಎಲೆಕ್ಟ್ರಾನುಗಳಿಂದ ಬೆಳಗುತ್ತವೆ. ಎಲೆಕ್ಟ್ರಾನುಗಳ ಅಲೆಯುದ್ದ ದೃಶ್ಯಬೆಳಕಿನ ಅಲೆಯುದ್ದಕ್ಕಿಂತ ಬಹುಪಟ್ಟು ಕಡಿಮೆ (ದೃಶ್ಯ ಬೆಳಕಿನ ಅತ್ಯಂತ ಕಡಿಮೆ ಅಲೆಯುದ್ದ ಸು. 4000 ಆಂಗ್‍ಸ್ಟ್ರಾಮ್. ಈ ಸೂಕ್ಷ್ಮದರ್ಶಕದಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಎಲೆಕ್ಟ್ರಾನುಗಳ ಅಲೆಯುದ್ದವಾದರೋ ಸು. 0.5 ಆಂಗ್‍ಸ್ಟ್ರಾಮ್). ಎಂದೇ, ಅವು ದೃಶ್ಯಬೆಳಕಿನಿಂದ ಪೃಥಕ್ಕರಿಸಲಾಗದ ಅತಿ ಸೂಕ್ಷ್ಮ ವಿವರಗಳನ್ನು ಪೃಥಕ್ಕರಿಸಬಲ್ಲವು. 

	ಎಲೆಕ್ಟ್ರಾನುಗಳನ್ನು ಉತ್ಸರ್ಜಿಸುವ ಎಲೆಕ್ಟ್ರಾನ್ ಕೋವಿ, ಅವನ್ನು ನಿರ್ದೇಶಿಸಿ ನಾಭೀಕರಿಸಬಲ್ಲ ಕಾಂತಕ್ಷೇತ್ರಗಳು, ಅತ್ಯುಚ್ಚ ನಿರ್ವಾತ ಕೊಳವೆ, ಎಲೆಕ್ಟ್ರಾನುಗಳು ಉತ್ಪಾದಿಸುವ ಬಿಂಬವನ್ನು ದಾಖಲಿಸಿ ಪ್ರದರ್ಶಿಸುವ ವ್ಯವಸ್ಥೆ — ಇವು ಎಲ್ಲ ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳ ಪ್ರಸಾಮಾನ್ಯ ಮೂಲ ಘಟಕಗಳು.

	ಮೂಲತಃ ಎರಡು ಬಗೆಯ ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳಿವೆ.  1. ಪ್ರೇಷಣೆ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ: ಎಲೆಕ್ಟ್ರಾನ್ ದೂಲ ನಮೂನೆಯನ್ನು ತಾಕಿದಾಗ ಕೆಲವು ಎಲೆಕ್ಟ್ರಾನುಗಳು ಪುಟಿದು ಎತ್ತೆತ್ತಲೋ ಹೋಗುತ್ತವೆ. ಕೆಲವನ್ನು ನಮೂನೆ ಅಪಶೋಷಿಸುತ್ತದೆ. ಉಳಿದವು ನಮೂನೆಯ ಮೂಲಕ ಹಾಯ್ದು ಅದರ ವರ್ಧಿತ ಬಿಂಬವನ್ನು ರೂಪಿಸುತ್ತವೆ. ಈ ಸೂಕ್ಷ್ಮದರ್ಶಕದಲ್ಲಿ ನಮೂನೆಯ ಅತ್ಯಂತ ತೆಳು ಹಾಲೆಯನ್ನು ಮಾತ್ರ ವೀಕ್ಷಿಸಬಹುದು (ಪ್ರಸಾಮಾನ್ಯವಾಗಿ ಕೆಲವು ಸಹಸ್ರ ಆಂಗ್‍ಸ್ಟ್ರಾಮ್‍ಗಿಂತ ದಪ್ಪವಿರಕೂಡದು).  ನಮೂನೆಯ ಮತ್ತೊಂದು ಪಾಶ್ರ್ವದಲ್ಲಿ ಇರುವ ಫೋಟೋಗ್ರಫಿಕ್ ಫಲಕ ಅಥವಾ ಪ್ರತಿದೀಪ್ತಿ ಪರದೆಯ ಮೇಲೆ ವರ್ಧಿತ ಬಿಂಬ ದಾಖಲಾಗುತ್ತದೆ. ನಮೂನೆಯ ಒಂದು ಮಿಲಿಯ ಪಟ್ಟು ವರ್ಧಿತ ಬಿಂಬ ಪಡೆಯಬಹುದು. 2. ಕ್ರಮಲೋಕಿಸುವ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ: ಬಿಗಿಯಾಗಿ ನಾಭೀಕರಿಸಿದ ಎಲೆಕ್ಟ್ರಾನ್ ದೂಲ ನಮೂನೆಯ ಮೇಲ್ಮೈಯನ್ನು ಕೊಂಚಕೊಂಚವಾಗಿ ಕ್ರಮಲೋಕಿಸಿ ಅದರ ಮೂರು ಆಯಾಮಗಳ ವರ್ಧಿತ ಬಿಂಬ ಮೂಡಿಸುತ್ತದೆ. ಇದರಲ್ಲಿ ನಮೂನೆ ತೆಳುವಾಗಿರಲೇ ಬೇಕೆಂದಿಲ್ಲ. ಸು. 100,000 ಪಟ್ಟು ವರ್ಧಿತ ಬಿಂಬ ಉತ್ಪಾದಿಸಬಲ್ಲದು. 

	ಇವಲ್ಲದೆ ಕ್ರಮಲೋಕಿಸುವ ಪ್ರೇಷಣೆ ಸೂಕ್ಷ್ಮದರ್ಶಕ, ಎಲೆಕ್ಟ್ರಾನ್ ಶೋಧಕ (ಪ್ರೋಬ್) ಸೂಕ್ಷ್ಮವಿಶ್ಲೇಷಕ ಎಂಬ ವಿಶೇಷೋದ್ದೇಶ ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳೂ ಉಂಟು. ಮೊದಲನೆಯದು ನಮೂನೆಯಲಿರುವ ಪ್ರತಿಯೊಂದು ಪರಮಾಣುವನ್ನೂ ಪೃಥಕ್ಕರಿಸಬಲ್ಲದು. ಎರಡನೆಯದು ನಮೂನೆಯ ರಾಸಾಯನಿಕ ಸಂರಚನೆಯ ಮಾಹಿತಿಯನ್ನೂ ಒದಗಿಸಬಲ್ಲದು.

	ಕ್ರಮಲೋಕಿಸುವ ಶೋಧಕ ಸೂಕ್ಷ್ಮದರ್ಶಕ: ಇದು ಒಂದು ಪರಮಾಣು ಗಾತ್ರದಷ್ಟು ಮೊನಚು ತುದಿಯ ಲೋಹ ಶೋಧಕದ ನೆರವಿನಿಂದ ನಮೂನೆಯ ಮೇಲೈಯನ್ನು ಕ್ರಮಲೋಕಿಸಿ ಪರಮಾಣು ಅಥವಾ ಅಣು ಜಾಲದ 3 ಆಯಾಮದ ಬಿಂಬೋತ್ಪತ್ತಿ ಮಾಡುತ್ತದೆ. ಕ್ರಮಲೋಕಿಸುವ ಸುರಂಗಕೊರೆಯುವ (ಸ್ಕ್ಯಾನಿಂಗ್ ಟನೆಲಿಂಗ್) ಸೂಕ್ಷ್ಮದರ್ಶಕ ಮತ್ತು ಪರಮಾಣವಿಕ ಬಲ ಸೂಕ್ಷ್ಮದರ್ಶಕ ಇದರ ಎರಡು ಪ್ರಭೇದಗಳು.

	ಸೂಕ್ಷ್ಮದರ್ಶಕ ವಿಕಸನದ ಕಾಲರೇಖೆ: ಅಜ್ಞಾತ ವ್ಯಕ್ತಿಯಿಂದ ಓದುವ ಕಲ್ಲು ಎಂಬ ಹೆಸರಿನ ಗಾಜಿನಗೋಲದ ಉಪಜ್ಞೆ (ಸು. ಕ್ರಿ.ಶ 1000). ಸ್ಯಾಲ್ವಿನೊ ಡಿ ಆರ್ಮಟೆ ಎಂಬಾತನಿಂದ ಧಾರಣಯೋಗ್ಯ ಕನ್ನಡಕಗಳ ಉಪಜ್ಞೆ (ಸು. 1284). ಮಸೂರಗಳನ್ನು ಯುಕ್ತ ಜೋಡಣೆಯುಳ್ಳ ಕೊಳವೆಯ ಮೂಲಕ ವಸ್ತುಗಳನ್ನು ನೋಡಿದರೆ ಅವು ದೊಡ್ಡದಾಗಿ ಕಾಣುತ್ತವೆ ಎಂಬುದರ ಉಪಜ್ಞೆ, ಝಕಾರಿಯಾಸ್ ಜಾನ್‍ಸೆನ್ ಮತ್ತು ಹ್ಯಾನ್ಸ್ ಜಾನ್ಸೆನ್‍ರಿಂದ (1590). ರಾಬರ್ಟ್ ಹುಕ್ (1635-1703) ಸರಳ ಸೂಕ್ಷ್ಮದರ್ಶಕದಿಂದ ಕಾರ್ಕ್‍ನ ಹಾಲೆ ವೀಕ್ಷಿಸಿದ್ದು (1665). ಆಂಟನ್ ವಾನ್ ಲೀವೆನ್‍ಹುಕ್ (1632-1723) ಮೊದಲನೆಯ ಸರಳ ಸೂಕ್ಷ್ಮದರ್ಶಕ ನಿರ್ಮಿಸಿದ್ದು (1674). ವರ್ಣವಿಪಥನ ಪ್ರಮಾಣ ಕಡಿಮೆ ಮಾಡುವುದು ಮುಂತಾದ ಅನೇಕ ತಾಂತ್ರಿಕ ಸುಧಾರಣೆಗಳಿಂದಾಗಿ ವಿಜ್ಞಾನಿಗಳಿಂದ ಸೂಕ್ಷ್ಮದರ್ಶಕಕ್ಕೆ ಮಾನ್ಯತೆ (18ನೆಯ ಶತಮಾನ). ಅನೇಕ ದುರ್ಬಲ ಮಸೂರಗಳ ಯುಕ್ತ ಸಂಯೋಜನೆಯಿಂದ ಗೋಳೀಯ ವಿಪಥನದ ಪ್ರಮಾಣ ಕಡಿಮೆ ಮಾಡಬಹುದೆಂದು ಜೋಸೆಫ್ ಜ್ಯಾಕ್ಸನ್ ಲಿಸ್ಟರ್ (1786-1869) ಸಾಧಿಸಿ ತೋರಿಸಿದ್ದು (1830). ಅರ್ನೆಸ್ಟ್ ಅಬ್ಬೆ (1840-1905) ಎಂಬಾತನಿಂದ ಗರಿಷ್ಠ ಪೃಥಕ್ಕರಣ ಸಾಧಿಸಲು ನೆರವಾಗುವ ಅಬ್ಬೆ ಸೈನ್ ಕಂಡೀಶನ್ ಎಂಬ ಗಣಿತೀಯ ಸೂತ್ರದ ಆವಿಷ್ಕಾರ (1872). ರಸಾಯನವಿಜ್ಞಾನ ನೊಬೆಲ್ ಪ್ರಶಸ್ತಿ ವಿಜೇತ (1925) ರಿಚರ್ಡ್ ಸಿಗ್ಮಾಂಡಿಯಿಂದ (1865-1929) ಬೆಳಕಿನ ಅಲೆಯುದ್ದಕ್ಕಿಂತ ಚಿಕ್ಕ ವಸ್ತುಗಳನ್ನು ಅಧ್ಯಯಿಸಬಲ್ಲ ಅಧಿಸೂಕ್ಷ್ಮದರ್ಶಕದ ನಿರ್ಮಾಣ (1903). ಭೌತಜ್ಞಾನ ನೊಬೆಲ್ ಪ್ರಶಸ್ತಿ ವಿಜೇತ (1953) ಫ್ರಿಟ್ಸ್ ಝೆರ್ನೈಕ್‍ನಿಂದ (1888-1966) ಪ್ರಾವಸ್ಥೆ ವೈದೃಶ್ಯ ಸೂಕ್ಷ್ಮದರ್ಶಕದ ಉಪಜ್ಞೆ (1932). ಭೌತವಿಜ್ಞಾನ ನೊಬೆಲ್ ಪ್ರಶಸ್ತಿ ವಿಜೇತ (1986) ಅರ್ನೆಸ್ಟ್ ರುಸ್ಕ (1906-1988) ಮತ್ತು ಸಹವರ್ತಿಗಳಿಂದ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಉಪಜ್ಞೆ (1931). ಭೌತವಿಜ್ಞಾನ ನೊಬೆಲ್ ಪ್ರಶಸ್ತಿ ವಿಜೇತರಾದ (1986) ಜೆರ್ಡ್ ಬಿನ್ನಿಗ್ (ಜ. 1947) ಮತ್ತು ಹೆಯಿನ್‍ರಿಚ್ ರ್ಹೋರೆರ್‍ರಿಂದ (ಜ.1933) ಕ್ರಮಲೋಕಿಸುವ ಸುರಂಗಕೊರೆಯುವ ಸೂಕ್ಷ್ಮದರ್ಶಕದ ಉಪಜ್ಞೆ (1981).			
				*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ